ಅಯ್ಯಾ, ತನ್ನ ಜನ್ಮಾಂತರದ ಮಹಾದುಃಖವ ನೆನಸಿಕೊಂಡು
ಒಂದು ವೇಳೆ ಮಹಾತತ್ವಜ್ಞಾನಾನಂದದ ನಿಜಜ್ಞಾನಿಯಾಗುವುದಯ್ಯ.
ಮತ್ತೊಂದು ವೇಳೆ ಮಲತ್ರಯಪಾಶಬದ್ಧನಾಗಿ
ಮಹಾಭ್ರಷ್ಟತನದಿಂದ ಚರಿಸುವುದಯ್ಯ
ಒಂದು ವೇಳೆ ಪರಮ ವಿರಕ್ತಿಯ ಹೇಳುವುದಯ್ಯ
ಒಂದು ವೇಳೆ ಕಚ್ಚೆಹರುಕಬುದ್ಧಿಯನೊಡಗೂಡಿ
ಅಪ್ಟಭ್ರಷ್ಟತನದಿಂದ ಚರಿಸುವುದಯ್ಯ
ಒಂದು ವೇಳೆ ಪುರಾಣವೈರಾಗ್ಯದಿಂದೆ ಮಹಾತ್ಯಾಗಿಯಾಗುವುದಯ್ಯ
ಮತ್ತೊಂದು ವೇಳೆ ಮಹಾಲೋಭಿತನದಿಂದ
ಭವಪಾಶದಲ್ಲಿ ಬಿದ್ದು ತೊಳಲುವುದಯ್ಯ
ಇಂಥ ಕರ್ಮಜಡ ಕುಬ್ಜ ಜೀವಮನದಸಂಗವ ತೊಲಗಿಸಿ ರಕ್ಷಿಸಯ್ಯ
ಎನ ಸೂತ್ರಾಧಾರ ಸಚ್ಚಿದಾನಂದ ಸಕಲಾಗಮಂಗಳಮೂರ್ತಿ
ಮೋಕ್ಷಪ್ರದಾಯಕ ಶ್ರೀಗುರುಲಿಂಗಜಂಗಮವೆ
ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ.