Index   ವಚನ - 36    Search  
 
ನಿಮ್ಮ ಶರಣಗಣಂಗಳ ತೊತ್ತಿನ ತೊತ್ತ ಮಾಡಿಸಯ್ಯ ಎನ್ನ ಪರಮಾರಾಧ್ಯ. ನಿಮ್ಮ ಶರಣಗಣಂಗಳ ಭೃತ್ಯರಭೃತ್ಯನ ಮಾಡಿರಯ್ಯ ಎನ್ನ ಸಚ್ಚಿದಾನಂದಮೂರ್ತಿ. ನಿಮ್ಮ ಶರಣಗಣಂಗಳ ಬಾಗಿಲಕಾಯ್ವ ದ್ವಾರವಾಟಕನ ಸೇವಕನ ಮಾಡಿರಯ್ಯ ಎನ್ನ ನಿಷ್ಕಳಂಕಮೂರ್ತಿ. ನಿಮ್ಮ ಶರಣಗಣಂಗಳ ಪಾದರಕ್ಷೆಯಕಾಯ್ವನ ಭೃತ್ಯನೆಂದೆನಿಸಿರಯ್ಯ ಎನ್ನ ನಿಶ್ಶೂನ್ಯಮೂರ್ತಿ ನಿಮ್ಮ ಶರಣಗಣಂಗಳ ಮನೆಯ ಬೀಸುವಕಲ್ಲು ಅರೆವಕಲ್ಲು ಬಚ್ಚಲಕಲ್ಲು ಮೆಟ್ಟುಗಲ್ಲಮಾಡಿರಯ್ಯ ಎನ್ನ ನಿರಂಜನಮೂರ್ತಿಯೆ. ಎನ್ನ ಜನ್ಮಾಂತರದ ಭವದುಃಖದ ಉದರಾಗ್ನಿ ಮದಾಗ್ನಿ ವಡಬಾಗ್ನಿ ಕಾಮಾಗ್ನಿ ಶೋಕಾಗ್ನಿ ಅವಿದ್ಯಾಮಾಯಾಗ್ನಿ ಮೊದಲಾಗಿ ನೀವಿಕ್ಕಿದ ಕಿಚ್ಚ ನೊಂದಿಸಿರಯ್ಯ, ನಿಮ್ಮ ಧರ್ಮ ನಿಮ್ಮ ಧರ್ಮ ಶ್ರೀಗುರುಲಿಂಗಜಂಗಮವೆ, ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ.