Index   ವಚನ - 35    Search  
 
ಅಯ್ಯಾ, ನೀವೇ ಸರ್ವಲೋಕ ಸೃಷ್ಟಿಕರ್ತರೆಂದು ಹೇಳಿತ್ತಯ್ಯ ವೇದಶಾಸ್ತ್ರಾಗಮ ಸ್ಮೃತಿಗಳು. ನೀವೇ ಸರ್ವ ಚೈತನ್ಯವೆಂದು ಹೇಳಿದವಯ್ಯ ತರ್ಕ ವ್ಯಾಕರಣ ಮಾಘ ರಘುವಂಶ ಸರ್ವಜ್ಞನೀತಿ ಮೊದಲಾಗಿ. ನೀವೇ ನಿಜಮೋಕ್ಷಮಂದಿರವೆಂದು ಹೇಳಿದವಯ್ಯ ಪ್ರಮಥಗಣಂಗಳ ಎರಡೆಂಬತ್ತೆಂಟುಕೋಟಿ ವಚನಂಗಳು. ನೀವೇ ಚಿದೈಶ್ವರ್ಯ ಚಿದಾಭರಣ ಚಿದ್ಬ್ರಹ್ಮವೆಂದು ಸೂಚಿಸಿದವಯ್ಯ ಪರಮಬೋಧಾಮೃತಂಗಳು. ದೇವಾ, ಎನ್ನಪರಾಧವೆಂಬ ಅಜ್ಞಾನಕ್ಕೆ ನೀವೆ ಜ್ಞಾನಚಕ್ಷುವಯ್ಯ. ಶ್ರೀಗುರುಲಿಂಗಜಂಗಮವೆ, ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ!