ಸ್ವಯಾಧೀನಮುಕ್ತನೆಂಬುವನೊಬ್ಬ; ಪರಾಧೀನಮುಕ್ತನೆಂಬುವನೊಬ್ಬ.
ಕರ್ತೃಹೀನವಾಗಿ ಆತ್ಮನು ತನ್ನಿಂದ ತಾನೆ ಮುಕ್ತನೆಂಬುದು
ಅದು ಅಜ್ಞಾನ ನೋಡಾ.
ಆತ್ಮನು ಪಶುಪಾಶಬದ್ಧನು,
ಅನಾದಿ ಮಲಯುಕ್ತನಾಗಿ, ಪಶುವಾಗಿ, ಆತ್ಮನೊಬ್ಬನುಂಟೆಂಬೆ.
ಅನಾದಿಯಾಗಿ ಪಶುಪತಿಯಾಗಿ ನಿರ್ಮಲನಪ್ಪ
ಶಿವನೊಬ್ಬನು ಬೇರುಂಟೆಂಬೆ.
ಮಲ ಮಾಯಾ ಕರ್ಮವನುಂಡು ತೀರಿಸಿ
ಶಿವನ ಪ್ರಸಾದದಿಂದ ಮುಕ್ತನೆಂಬೆ.
ಆ ಮುಕ್ತಿಯಲ್ಲಿಯು ಪರಾಧೀನಮುಕ್ತನಲ್ಲದೆ ಏಕತ್ವವಿಲ್ಲ ಎಂಬೆ.
ಏಕತ್ವವಿಲ್ಲದಾಗಳೆ ಮುಕ್ತಿಯೆಂಬುದು ಹುಸಿ.
ಮಸಿಯೆಂದಾದರೂ ಬೆಳ್ಪಾದುದುಂಟೆ?
ಅಂಬರ ಮಾಸಿದರೆ ತೊಳದಡೆ ಬೆಳ್ಳಹುದಲ್ಲದೆ,
ಮಲದಲ್ಲಿ ಸೀರೆಯ ಮಾಡಿ ತೊಳೆದರೆ ಬಿಳಿದಾಗಬಲ್ಲುದೆ?
ಇದು ಕಾರಣ, ದ್ವೈತಕ್ಕೆ ಎಂದೂ ಮುಕ್ತಿಯಿಲ್ಲಯೆಂಬೆ.
ಇತರ ಮತಂಗಳಂತಿರಲಿ.
ಪರಶಿವನ ಪರಶಕ್ತಿಯಿಂದ ಸುಜ್ಞಾನಶಕ್ತಿ ಉದಯವಾದಳು.
ಆ ಸುಜ್ಞಾನಶಕ್ತಿಯ ಗರ್ಭದಲ್ಲಿ ಶಿವಶರಣನುದಯವಾದ.
ಅಂತುದಯವಾದ ಶರಣನು ಆ ಸುಜ್ಞಾನಶಕ್ತಿಯ ಸಂಗವ ಮಾಡಿ,
ಆ ಸುಜ್ಞಾನಶಕ್ತಿಯೊಳಗೆ ತಾನೆಂಬ ಭಾವವ ಮರೆದು,
ತಾನೆ ಪರಶಿವತತ್ವದೊಳಗೆ
ದೀಪ ದೀಪವ ಬೆರಸಿದಂತೆ ರೂಪೆರಡಳಿದು ಏಕಾರ್ಥವಾಗಿ
ನಿತ್ಯ ಮುಕ್ತನಾದ ನಿಜಲಿಂಗೈಕ್ಯನು ದ್ವೈತಿಯಲ್ಲ; ಅದ್ವೈತಿಯಲ್ಲ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Svayādhīnamuktanembuvanobba; parādhīnamuktanembuvanobba.
Kartr̥hīnavāgi ātmanu tanninda tāne muktanembudu
adu ajñāna nōḍā.
Ātmanu paśupāśabad'dhanu,
anādi malayuktanāgi, paśuvāgi, ātmanobbanuṇṭembe.
Anādiyāgi paśupatiyāgi nirmalanappa
śivanobbanu bēruṇṭembe.
Mala māyā karmavanuṇḍu tīrisi
śivana prasādadinda muktanembe.
Ā muktiyalliyu parādhīnamuktanallade ēkatvavilla embe.
Ēkatvavilladāgaḷe muktiyembudu husi.
Masiyendādarū beḷpāduduṇṭe?
Ambara māsidare toḷadaḍe beḷḷahudallade,
maladalli sīreya māḍi toḷedare biḷidāgaballude?
Idu kāraṇa, dvaitakke endū muktiyillayembe.
Itara mataṅgaḷantirali.
Paraśivana paraśaktiyinda sujñānaśakti udayavādaḷu.
Ā sujñānaśaktiya garbhadalli śivaśaraṇanudayavāda.
Antudayavāda śaraṇanu ā sujñānaśaktiya saṅgava māḍi,
ā sujñānaśaktiyoḷage tānemba bhāvava maredu,
tāne paraśivatatvadoḷage
dīpa dīpava berasidante rūperaḍaḷidu ēkārthavāgi
nitya muktanāda nijaliṅgaikyanu dvaitiyalla; advaitiyalla kāṇā,
mahāliṅgaguru śivasid'dhēśvara prabhuvē.