Index   ವಚನ - 61    Search  
 
ಆದಿಯಲ್ಲಿ ಶಿವತತ್ವದಲ್ಲಿ ರೇಣುಕನುದಯ[ವಾ]ಗದಿರ್ದಡೆ, ಇಲ್ಲಿ ಶಿವಲಿಂಗದಲ್ಲಿ ಉದಯವಾದ ಪರಿಯೆಂತೋ? ಆ ಶಿವನಲ್ಲಿಯೆ ಹುಟ್ಟಿ ಶಿವನಲ್ಲಿಯೇ ಲಯವಾದ ರೇವಣಸಿದ್ಧೇಶ್ವರನು, ಅನಾದಿಮುಕ್ತನಲ್ಲ, ಅವಾಂತರಮುಕ್ತರೆಂಬ ಅಜ್ಞಾನಿಗಳಿಗೆ ನಾಯಕನರಕ ತಪ್ಪದು. ಸಕಲಕೋಟಿ ಬ್ರಹ್ಮಾಂಡಕ್ಕಾಧಾರಕಾರಣವಾಗಿಯು ಸಮಸ್ತ ಲೋಕಂಗಳ ಪವಿತ್ರಕಾರಣವಾಗಿಯು ಪರಮೇಶ್ವರನ ನಿಜಚಿನ್ಮಯಮಪ್ಪ ಊರ್ಧ್ವಮುಖದಲ್ಲಿ ಚಿತ್ಕಲಾ ಸ್ವರೂಪರಪ್ಪ ರುದ್ರಗಣಂಗಳುದಯವಾದರು ನೋಡಾ. ಆ ರುದ್ರಗಣಂಗಳು ಮತ್ತೂ ಜಗತ್ಪಾವನ ಕಾರಣ ಮರ್ತ್ಯದಲ್ಲಿ ಅವತರಿಸಿದಡೆ, ಅದೇನು ಕಾರಣ ಉದಯವಾದರು ವಾಸನಾಗುಣವಿಲ್ಲದೆ ಎಂದು ಸಂದೇಹಿಸುವ ಅವಲಕ್ಷಣ ನಾಯ ನಾಲಗೆಯ,ಯಮದೂತರು ಕೀಳದೆ ಮಾಣ್ಬರೆ? ಇವರಿಂಗೆ ನಾಯಕನರಕ ತಪ್ಪದು ಕಾಣಾ, ಎಲೆ ಶಿವನೆ ನೀ ಸಾಕ್ಷಿಯಾಗಿ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.