ಆದಿಪಿಂಡ ಮಧ್ಯಪಿಂಡ ಅನಾದಿಪಿಂಡವೆಂದು
ಮೂರು ಪ್ರಕಾರವಾಗಿಪ್ಪುದು.
ಆದಿ ಪಿಂಡವೇ ಜೀವ ಪಿಂಡ.
ಮಧ್ಯ ಪಿಂಡವೇ ಸುಜ್ಞಾನ ಪಿಂಡ.
ಅನಾದಿ ಪಿಂಡವೇ ಚಿತ್ಪಿಂಡ.
ಜೀವ ಪಿಂಡವೆಂದು
ಅಷ್ಟ ತನುಮೂರ್ತಿಗಳಿಂದ ಉತ್ಪತ್ತಿಯಾದವು.
ಅಂದಿಂದ ಭವಭವಂಗಳೊಳಗೆ ಬಂದು,
ಶಿವಕೃಪೆಯಿಂದ ಭವಕಲ್ಪಿತ ತೀರಿ,
ಶಿವವಾಸನಾ ಪಿಂಡಸ್ವರೂಪವನಂಗೀಕರಿಸಿದ್ದೀಗ ಜೀವಪಿಂಡ.
ಸುಜ್ಞಾನ ಪಿಂಡವೆಂದು ಶಿವಾಜ್ಞೆಯಿಂದ ಚಿತ್ತಿನಂಶವೆ ಸಾಕಾರವಾಗಿ,
ಜಗದ್ದಿತಾರ್ಥಕಾರಣ ಮರ್ತ್ಯಲೋಕದಲ್ಲಿ ಉದಯವಾಗಿ,
ಶರೀರಸಂಬಂಧಿಗಳಾಗಿಯು
ಆ ಶರೀರದ ಗುಣಧರ್ಮ ಕರ್ಮಂಗಳ ಹೊದ್ದಿಯು ಹೊದ್ದದಿಪ್ಪರು.
ಅದೇನು ಕಾರಣವೆಂದಡೆ: ಚಿದಂಶಿಕರಾದ ಕಾರಣ.
ಶರೀರವಿಡಿದರೆಯೂ ಆ ಶರೀರ ಸಂಬಂಧಿಗಳಲ್ಲ ಎಂಬುದಕ್ಕೆ ದೃಷ್ಟವಾವುದೆಂದಡೆ:
ಉರಿ ಬಂದು ಕರ್ಪೂರವ ಸೋಂಕಲಾಗಿ
ಕರ್ಪೂರದ ಗುಣ ಕೆಟ್ಟು ಉರಿಯೇ ಆದಂತೆ,
ಪರುಷದ ಬಿಂದು ಬಂದು ಲೋಹವ ಸೋಂಕಲು
ಆ ಲೋಹದ ಗುಣ ಕೆಟ್ಟು ಚಿನ್ನವಾದಂತೆ,
ಆ ಶರಣರು ಬಂದು ಆ ಲಿಂಗವ ಸೋಂಕಲಾಗಿ,
ಆ ಪಂಚಭೂತದ ಪ್ರಕೃತಿಕಾಯ ಹೋಗಿ,
ಪ್ರಸಾದ ಕಾಯವಾಗಿತ್ತಾಗಿ.
ಇದು ಕಾರಣ, ಬಸವ ಮೊದಲಾದ ಪ್ರಮಥರು
ಧರಿಸಿದ ಶರೀರವೆಲ್ಲ
ಸುಜ್ಞಾನಪಿಂಡವೆಂದು ಹೇಳಲ್ಪಟ್ಟಿತ್ತು.
ಅದುಕಾರಣ ಪಂಚಭೂತಂಗಳ ಪವಿತ್ರವ ಮಾಡಲೋಸ್ಕರವಾಗಿ,
ಧರಿಸಿದ ಪಿಂಡವಲ್ಲದೆ, ವಾಸನಾ ಧರ್ಮದ ಪಿಂಡವಲ್ಲ.
ಶುದ್ಧರೇ ಅಹುದು ದೇಹಮಾತ್ರದಲಾದ
ವಾಸನಾ ಪಿಂಡವೆಂಬುದದು ಅಜ್ಞಾನ ನೋಡ.
ಚಿತ್ಪಿಂಡವೆಂದು ಚಿನ್ನ ಬಣ್ಣದ ಹಾಂಗೆ ಶಿವತತ್ವವ ಬಿಟ್ಟು
ಎಂದೂ ಅಗಲದೆ ಇದ್ದಂಥಾದು.
ಚಿದಂಗಸ್ವರೂಪವಾಗಿ,
ಚಿದ್ಭನ ಲಿಂಗಕ್ಕೆ ಚಿದ್ಭಾಂಡ ಸ್ಥಾನವಾಗಿದ್ದಂಥದು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.