Index   ವಚನ - 87    Search  
 
ಸಮಸ್ತ ಲೋಕಾದಿ ಲೋಕಂಗಳಿಲ್ಲದಂದು ಅನಾದಿ ಪರಶಿವ ನೀನೊರ್ಬನೆ ಇರ್ದೆಯಯ್ಯ. ಆ ನಿರಕಾರ ಪರಶಿವನಿಂದ ನಾನುದಯವಾಗಿ, ಮಾಯಾರಂಜನೆ ಹುಟ್ಟದ ಮುನ್ನ ನಿರಂಜನನೆಂಬ ಗಣೇಶ್ವರನಾಗಿರ್ದೆನು. ಜ್ಞಾನಾಜ್ಞಾನಗಳಿಲ್ಲದಂದು ಜ್ಞಾನಾನಂದನೆಂಬ ಗಣೇಶ್ವರನಾಗಿರ್ದೆನು. ಈ ಶರೀರವಿಲ್ಲದಂದು ನಿರ್ಮಲನೆಂಬ ಗಣೇಶ್ವರನಾಗಿರ್ದೆನು. ಬಸವ ಮೊದಲಾದ ಪ್ರಮಥರೆಲ್ಲರೂ ಪ್ರಸಾದವ ಎನ್ನಲ್ಲಿ ಸಂಬಂಧಿಸಿ, ನಿನ್ನ ಕೃಪಾಪ್ರಸಾದವ ಎನ್ನಲ್ಲಿ ಮೂರ್ತಿಗೊಳಿಸಿ, `ಇನ್ನಾವುದಕ್ಕೂ ಅಂಜಬೇಡ' ಎಂದು, ನೀನು, ನಿನ್ನ ಪ್ರಮಥರು ಎನ್ನ ಆಜ್ಞಾಪಿಸಿ ಮರ್ತ್ಯಕ್ಕೆ ಕಳುಹಿದಿರಿಯಾಗಿ, ಕಳುಹಿದ ಭೇದವ ಶಿವಜ್ಞಾನೋದಯದಿಂದ ಅರಿದು ಸಿದ್ಧಲಿಂಗನೆಂಬ ನಾಮ ಎನಗೆ ನಿನ್ನಿಂದ ಬಂದಿತ್ತೆಂಬುದ ಅರಿದೆನು ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.