Index   ವಚನ - 129    Search  
 
ಹದ್ದ ನುಂಗಿದ ಕಾಗೆ ಬದ್ಧ ಭವಿ ನೋಡಾ. ಎದ್ದು ಹಾರಲು ಸಿದ್ಧರ ಗಾರುಡವೆಲ್ಲ ಬಿದ್ದೋಡಿವು ನೋಡಾ. ಬ್ರಹ್ಮಚರಿಯವೆಲ್ಲ ಭ್ರಮೆಗೊಂಡಿತ್ತು ನೋಡಾ. ತ್ರೈಜಗವೆಲ್ಲಾ ಮೂರ್ಛೆಗತರಾದರು ನೋಡಾ. ವೀರರು ಧೀರರು ವ್ರತಿಗಳು ಸಾಮರ್ಥ್ಯರೆಲ್ಲ ಮತಿಗೆಟ್ಟು ಮರುಳಾದರು ನೋಡಾ. ಸತಿ ಸುತರ ಕೂಟವನೊಲ್ಲೆನೆಂಬ ವಿರಕ್ತರೆಲ್ಲ ವಿಕಾರಗೊಂಡರು ನೋಡಾ. ಶಿವ ನಿರ್ಮಿತದಿಂದಾದ ಮಾಯವ ಪರಿಹರಿಸಿಹೆನೆಂದಡೆ, ಅಜ ಹರಿ ರುದ್ರಾದಿಗಳಿಗೆ ಅಸಾಧ್ಯ ನೋಡಾ. ಈ ಮಾಯಾ ಪ್ರಪಂಚ ಕಳೆವಡೆ ಪರಶಿವಜ್ಞಾನ ಮುಖದಿಂದ ಅಲ್ಲದೆ ಪರಿಹರವಾಗದು ನೋಡಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.