Index   ವಚನ - 148    Search  
 
ಕರ್ಮಿ ಬಲ್ಲನೆ ಭಕ್ತಿಯ ಮರ್ಮವ, ಚರ್ಮವ ತಿಂಬ ಸೊಣಗ ಬಲ್ಲುದೆ ಪಾಯಸದ ಸವಿಯ? ಉಚ್ಚಿಯ ಬಚ್ಚಲ ಮಚ್ಚಿ ಕಚ್ಚಿ ಕಡಿದಾಡುವ ಮರುಳು ಮಾನವರು ನಿಶ್ಚಿಂತ ನಿರಾಳನಿಗೊಲಿದು ಒಚ್ಚತ ಹೋಗಿ ಅಪ್ಪಿ ಅಗಲದಿಪ್ಪ ಅನುಪಮಸುಖವನಿವರೆತ್ತ ಬಲ್ಲರು? ಸಂಸಾರವೆಂಬ ಸೊಕ್ಕು ತಲೆಗೇರಿ ಮುಂದುಗಾಣದೆ ಅಕಟಕಟಾ ಕೆಟ್ಟಿತ್ತು ನೋಡಾ ತ್ರೈಜಗವೆಲ್ಲ. ಸ್ವರ್ಗ ಮರ್ತ್ಯ ಪಾತಾಳಕ್ಕೆ ಪಶುಪತಿ ಏಕೋದೇವನೆಂದು ಅರಿದು ಸಂಸಾರಪ್ರಪಂಚ ಮರೆಯಾ ಮರುಳೇ! ಪರಮಸುಖದೊಳಗಿರ್ದು ಅಲ್ಪಸುಖಕ್ಕೆ ಆಸೆಮಾಡುವ ಅಜ್ಞಾನಿಗಳನೇನೆಂಬೆನಯ್ಯ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ?