Index   ವಚನ - 171    Search  
 
ಗುರು ಅಳಿದನು ಉಳಿದನು ಎಂದೆಂಬರಿ ಗುರು ಅಳಿದರೆ ಜಗ ಉಳಿಯಬಲ್ಲುದೆ? `ಸ್ಥಾವರಂ ಜಂಗಮಾಧಾರಂ ನಿರ್ಮಲಂ ಸ್ಥಿರಮೇವ ಚ| ಜಗದ್ವಂದಿತಪಾದಾಯ ತಸ್ಮೈಶ್ರೀ ಗುರವೇ ನಮಃ||' ಎಂದುದಾಗಿ, ಗುರು ಅಳಿವನೂ ಅಲ್ಲ; ಉಳಿವನೂ ಅಲ್ಲ. ನಿಮ್ಮ ಭ್ರಾಂತಿಯೇ ಅಳಿದನು ಉಳಿದನು ಎಂದು ಕುತ್ತಗೊಳಿಸುತ್ತಿದೆಯಲ್ಲಾ. ಈ ವಿಕಾರದಲ್ಲಿ ಮುಳುಗಿದವನ ಶಿಷ್ಯನೆಂದೆಂಬೆನೆ? ಎನ್ನೆನಯ್ಯ. ಗುರು ಸತ್ತನೆಂದು ಬಸುರ ಹೊಯಿಕೊಂಡು ಬಾಯಿಬಡಿದುಕೊಡು ಅಳುತ್ತಿಪ್ಪ ದುಃಖ ಜೀವಿಗಳಿಗೆ ಗುರುವಿಲ್ಲ; ಗುರುವಿಲ್ಲವಾಗಿ ಲಿಂಗವಿಲ್ಲ; ಲಿಂಗವಿಲ್ಲವಾಗಿ ಜಂಗಮವಿಲ್ಲವಯ್ಯಾ. ಈ ತ್ರಿವಿಧವೂ ಇಲ್ಲವಾಗಿ, ಪಾದೋದಕ ಪ್ರಸಾದವೂ ಇಲ್ಲವಯ್ಯ. ಪಾದೋದಕ ಪ್ರಸಾದವಿಲ್ಲವಾಗಿ, ಮುಕ್ತಿಯೆಂಬುದು ಎಂದೆಂದಿಗೂ ಇಲ್ಲವಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.