Index   ವಚನ - 179    Search  
 
ವೇಧಾದೀಕ್ಷೆ ಮಂತ್ರದೀಕ್ಷೆ ಕ್ರಿಯಾದೀಕ್ಷೆಯೆಂಬ ದೀಕ್ಷಾತ್ರಯಂಗಳಿಂದ ತನುತ್ರಯಂಗಳ ಪೂರ್ವಾಶ್ರಯವ ಕಳೆದು ಲಿಂಗತ್ರಯಂಗಳ ಸಂಬಂಧಿಸಿದನದೆಂತೆಂದಡೆ: ವೇಧಾದೀಕ್ಷೆಯೆಂದು ಶ್ರೀಗುರು ತನ್ನ ಹಸ್ತವ ಶಿಷ್ಯನ ಮಸ್ತಕದಲ್ಲಿ ಸಂಯೋಗವ ಮಾಡಿದುದು; ಮಂತ್ರದೀಕ್ಷೆಯೆಂದು ಶ್ರೀಗುರು ಪ್ರಣವಪಂಚಾಕ್ಷರಿಯ ಮಂತ್ರವ ಕರ್ಣದಲ್ಲಿ ಉಪದೇಶಿಸಿದುದು; ಕ್ರಿಯಾದೀಕ್ಷೆಯೆಂದು ಆ ಮಂತ್ರ ಸ್ವರೂಪವನೆ ಇಷ್ಟಲಿಂಗ ಸ್ವರೂಪವ ಮಾಡಿ ಕರಸ್ಥಲದಲ್ಲಿ ಸಂಬಂಧಿಸಿದುದು. ಇದು ಕಾರಣ, ವೇಧಾ ದೀಕ್ಷೆಯಿಂದ ಕಾರಣ ತನುವಿನ ಪೂರ್ವಾಶ್ರಯವಳಿದು ಭಾವಲಿಂಗಸಂಬಂಧವಾಯಿತ್ತು. ಮಂತ್ರ ದೀಕ್ಷೆಯಿಂದ ಸೂಕ್ಷ್ಮತನುವಿನ ಪೂರ್ವಾಶ್ರಯವಳಿದು ಪ್ರಾಣಲಿಂಗಸಂಬಂಧವಾಯಿತ್ತು. ಕ್ರಿಯಾ ದೀಕ್ಷೆಯಿಂದ ಸ್ಥೂಲ ತನುವಿನ ಪೂರ್ವಾಶ್ರಯವಳಿದು ಇಷ್ಟಲಿಂಗಸಂಬಂಧವಾಯಿತ್ತು. ಅಂಗ ತ್ರಯಂಗಳಲ್ಲಿ ಲಿಂಗತ್ರಯಂಗಳ ಧರಿಸಿದೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.