Index   ವಚನ - 242    Search  
 
ಅವುದಾನೊಂದು ಪದಾರ್ಥವ ಲಿಂಗಾರ್ಪಿತವ ಮಾಡಿದ ಬಳಿಕ ಪದಾರ್ಥದ ಪೂರ್ವಾಶ್ರಯವಳಿದು ಪ್ರಸಾದವಾಯಿತ್ತು ನೋಡಾ. ಆ ಪ್ರಸಾದವ ಮುಟ್ಟುವ ಹಸ್ತವು ಪ್ರಸಾದ ಹಸ್ತ. ಆ ಪ್ರಸಾದವ ಕೊಂಬ ಜಿಹ್ವೆಯು ಪ್ರಸಾದ ಜಿಹ್ವೆ. ಆ ಪ್ರಸಾದಕ್ಕೆ ಭಾಜನವಾಗಿಪ್ಪ ಸರ್ವಾಂಗವು ಪ್ರಸಾದ ಕಾಯ ನೋಡಾ. ಪ್ರಸಾದವೆಂದರೆ ಪರಶಿವಸ್ವರೂಪು ತಾನೆ ನೋಡಾ. ಈ ಪರಮ ಪ್ರಸಾದ ಗ್ರಾಹಕನಾದ ಪ್ರಸಾದಿಯ ಬಾಹ್ಯಾಭ್ಯಂತರವೆಲ್ಲ ಪ್ರಸಾದಮಯ ನೋಡಾ. ಪ್ರಸಾದ ಸದ್ಭಾವದಲ್ಲಿ ಎಂಜಲೆಂಬ ಸಂಶಯ ಸುಳಿಯಲಾಗದು. ಎಂಜಲೆಂಬ ಸಂಶಯ ಸುಳಿದರೆ ಅದು ಅಜ್ಞಾನ ನೋಡಾ. ಅವಂಗೆ ಪ್ರಮಥ ಪ್ರಸಾದವಿಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.