Index   ವಚನ - 254    Search  
 
ಅಷ್ಟಷಷ್ಠಿಕೋಟಿ ತೀರ್ಥವ ಮಿಂದರಿಲ್ಲ ಕಾಣಿರಣ್ಣಾ. ಲಕ್ಷ ಲಕ್ಷ ಕೋಟಿ ಕೋಟಿ ಜಪ (ವ)ನೆಣಿಸಿದರಿಲ್ಲ ಕಾಣಿರಣ್ಣಾ. ಧ್ಯಾನ ಮೌನ ಹೋಮ ನೇಮ ಅನುಷ್ಠಾನವ ಮಾಡಿದರಿಲ್ಲ ಕಾಣಿರಣ್ಣಾ. ನೂರಿಪ್ಪತ್ತು ವೇಳೆ ಭೂಪ್ರದಕ್ಷಿಣವ ಮಾಡಿದರಿಲ್ಲ ಕಾಣಿರಣ್ಣಾ. ಕಾಶಿ ಕೇದಾರ ಶ್ರೀಶೈಲ ಶಿವಗಂಗೆಗೈದಿದರಿಲ್ಲ ಕಾಣಿರಣ್ಣಾ. ಇವೆಲ್ಲ ಬರಿಯ ಭ್ರಾಂತು. ಇಪ್ಪ ಠಾವ ಹೇಳಿಹೆನು ಕೇಳಿರಣ್ಣಾ. ಶ್ರೀಗುರು ಕರುಣದಿಂದ ಬಿಜಯಂಗೈಸಿ ಕೊಟ್ಟ ಪರಮಲಿಂಗ ತನ್ನ ಕರದಲ್ಲಿ ತುಂಬಿಪ್ಪುದಯ್ಯ. ಹಲವು ಕಡೆಗೆ ಹೋಹ ಮನವ ಧ್ಯಾನವೆಂಬ ಹಸ್ತದಲ್ಲಿ ಹಿಡಿದು ಆ ಲಿಂಗದ ಗೊತ್ತಿನಲ್ಲಿ ಕಟ್ಟಿ ನೆರೆಯಬಲ್ಲರೆ ಅಲ್ಲಿಪ್ಪನು ಶಂಭು ಪರಮೇಶ್ವರನು. ಇದೇ ನಿಶ್ಚಯ; ಉಳಿದವೆಲ್ಲ ಹುಸಿ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.