ಕಾಯ ಲಿಂಗಾರ್ಪಿತವಾದ ಬಳಿಕ
ಕರ್ಮತ್ರಯಗಳು ಇರಲಾಗದು ನೋಡಾ.
ಜೀವ ಲಿಂಗಾರ್ಪಿತವಾದ ಬಳಿಕ
ಸಂಸಾರವ್ಯಾಪ್ತಿಯಹಂಥಾ ಜೀವನ ಗುಣವಿರಲಾಗದು.
ಅದು ಅರ್ಪಿತವಲ್ಲ ನೋಡಾ.
ಕರಣಂಗಳು ಲಿಂಗಾರ್ಪಿತವಾದ ಬಳಿಕ
ಆ ಕರಣಂಗಳೆಲ್ಲವು ಲಿಂಗ ಕಿರಣಂಗಳಾಗಿ
ಆ ಲಿಂಗ ಕಿರಣವೆ ಹರಣವಾಗಿರಬೇಕು ನೋಡಾ.
ಕಾಯದ ಜೀವದ ಕರಣದ ಗುಣವ ಕಳೆಯದ
ಲಿಂಗಾರ್ಪಿತ ಪ್ರಸಾದಿಗಳೆಂಬ ಪ್ರಪಂಚಿಗಳ ಮಚ್ಚನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.