Index   ವಚನ - 290    Search  
 
ಶರಣನಂಗ ಲಿಂಗವನಪ್ಪಿತ್ತಾಗಿ ಶರಣನ ತನುವೆ ಲಿಂಗದ ತನು ನೋಡಾ. ಲಿಂಗದ ತನು ಶರಣನನಪ್ಪಿತ್ತಾಗಿ ಶರಣನ ತನುವೆ ಲಿಂಗದ ತನು ನೋಡಾ. ಶರಣನ ಮನ ಲಿಂಗವನಪ್ಪಿ, ಲಿಂಗದ ಮನ ಶರಣನನಪ್ಪಿದ ಕಾರಣ ಶರಣನ ಮನವೆ ಲಿಂಗ; ಲಿಂಗದ ಮನವೆ ಶರಣ ನೋಡಾ. ಶರಣನ ಹರಣ ಲಿಂಗವನಪ್ಪಿ ಲಿಂಗದ ಹರಣ ಶರಣನನಪ್ಪಿದ ಕಾರಣ ಶರಣನ ಹರಣವೆ ಲಿಂಗ ಲಿಂಗದ ಹರಣವೆ ಶರಣ ನೋಡಾ. ಶರಣನ ಭಾವವೆ ಲಿಂಗವನಪ್ಪಿ; ಲಿಂಗದ ಭಾವ ಶರಣನನಪ್ಪಿದ ಕಾರಣ ಶರಣನ ಭಾವವೆ ಲಿಂಗ; ಲಿಂಗದ ಭಾವವೆ ಶರಣ ನೋಡಾ. `ಅಹಂ ಮಾಹೇಶ್ವರಃ ಪ್ರಾಣೋ| ಮಮ ಪ್ರಾಣೋ ಮಾಹೇಶ್ವರಃ ತಸ್ಮಾದ್ಧವಿರಳಂ ನಿತ್ಯಂ| ಶರಣಂ ನಾಮವರ್ತತೇ||' ಎಂದುದಾಗಿ ಭಾವ ಭೇದವಿಲ್ಲ ಶರಣ ಲಿಂಗಕ್ಕೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.