Index   ವಚನ - 360    Search  
 
ಊರನಾಶ್ರಯಿಸುವನೆ ಉಪಜೀವಿಗಳಂತೆ? ಕಾಡನಾಶ್ರಯಿಸುವನೆ ಕರಡಿಯಂತೆ? ಊರನಾಶ್ರಯಿಸುವನಲ್ಲ, ಕಾಡಾನಶ್ರಯಿಸುವನೂ ಅಲ್ಲ ನೋಡಾ. ಊರಾವುದು ಕಾಡುವುದು ಎಂದರಿಯದೆ ಕಳವಳಿಸುತ್ತಿಪ್ಪರು ನೋಡಾ. ಊರೆಂದರೆ:ಮಾಯಾಸಂಬಂಧವಾದ ಪಂಚಭೌತಿಕ ಗ್ರಾಮ. ಕಾಡೆಂದರೆ:ಆ ಕಾಯವನಾಶ್ರಯಿಸಿಕೊಂಡಿಪ್ಪ ಸಕಲ ಕರಣಂಗಳು ಕಾಣಾ ಮರುಳೆ. ಕಾಯದ ಕರಣಂಗಳಿಗೆ ವಶಗತವಾಗಿರ್ದು ಊರಿಗೆ ಹೊರಗಾಗಿದ್ದೆನೆಂಬ ಉಪಜೀವಿಗಳನೇನೆಂಬೆನಯ್ಯ? ಇದುಕಾರಣ ನಿಮ್ಮ ಶರಣರು ಕಾಯವನು ಜೀವವನು ಕರಣವನು ಕೇವಲ ಪರಂಜ್ಯೋತಿಲಿಂಗದೊಳಗೆ ಬೆರಸಿ ಬೇರಿಲ್ಲದೆ ಕಾಯವನು ಜೀವವನು ಕರಣವನು ಹೊದ್ದದೆ ಮಹಾಘನಲಿಂಗಪದದೊಳಗಿಪ್ಪರಯ್ಯ ಪ್ರಾಣಲಿಂಗ ಸಂಬಂಧಿಗಳು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.