Index   ವಚನ - 380    Search  
 
ಪಿಂಡಾಂಡದ ಮೇಲೊಂದು ತುಂಬಿದ ಭಾಂಡೆಯ ಕಂಡೆನಯ್ಯ. ಪಿಂಡಾಂಡವ ಹೊದ್ದದೆ ಅಖಂಡಮಯವಾಗಿದೆ ನೋಡಾ. ಆ ಭಾಂಡವಯೆನ್ನ ಮಂಡೆಯ ಮೇಲೆ ಹೊತ್ತಿಪ್ಪೆನಯ್ಯ. ಮೂಲಜ್ಞಾನಾಗ್ನಿಯೆದ್ದು ಮೇಲಣ ಕಮಲವ ತಾಗಲು ಕಮಲದೊಳಗಣ ಕೊಡ ಕೊಡದೊಳಗಣ ಉದಕ ಉಕ್ಕಿ ಶರೀರದ ಮೇಲೊಗಲು ಪಿಂಡ ಕರಗಿ ಅಖಂಡಮಯನಾದೆನು. ಅಮೃತ ಬಿಂದುವ ಸೇವಿಸಿ ನಿತ್ಯಾನಿತ್ಯವ ಗೆದ್ದು ನಿರ್ಮಲ ನಿರಾವರಣನಾದೆನು. ಸೀಮೆಯ ಮೀರಿ ನಿಸ್ಸೀಮನಾದೆನು. ಪರಮ ನಿರಂಜನನನೊಡಗೂಡಿ ಮಾಯಾರಂಜನೆಯಳಿದು ನಿರಂಜನನಾಗಿದ್ದೆನು ಕಾಣಾ. ಸಮಸ್ತ ವಿಶ್ವಪ್ರಪಂಚಿಗೆ ಹೊರಗಾಗಿ ನಿಃಪ್ರಪಂಚ ನಿರ್ಲೇಪನಾಗಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.