Index   ವಚನ - 408    Search  
 
ಕಟ್ಟರಸಿಲ್ಲದ ರಾಜ್ಯದಂತೆ, ಜೀವನಿಲ್ಲದ ಕಾಯದಂತೆ ದೇವನಿಲ್ಲದ ದೇಗುಲದಂತೆ, ಪತಿಯಿಲ್ಲದ ಸತಿಯ ಶೃಂಗಾರದಂತೆ, ಗುರುವಾಜ್ಞೆಯಿಲ್ಲದೆ ತನ್ನ ಮನಕ್ಕೆ ತೋರಿದ ಹಾಂಗೆ ಮಾಡಿದ ಭಕ್ತಿ ಶಿವನ ಮುಟ್ಟದು ನೋಡಾ. ಶ್ರೀಗುರುವಿನ ವಾಕ್ಯದಿಂದಹುದೆಂದುದನು ಅಲ್ಲ ಎಂದು ಉದಾಸೀನದಿಂದ ಮಾಡಿದ ಭಕ್ತಿ ಅದು ಕರ್ಮಕ್ಕೆ ಗುರಿ ನೋಡಾ. ಶ್ರೀಗುರುವಾಜ್ಞೆವಿಡಿದು ಆಚರಿಸುವ ಸತ್ಯ ಸಾತ್ವಿಕ ಭಕ್ತಿ ಸದ್ಯೋನ್ಮುಕ್ತಿಗೆ ಕಾರಣ ನೋಡಾ. ಏಕೋಭಾವದ ನಿಷ್ಠೆ ಭವದ ವ್ಯಾಕಲುವನೆಬ್ಬಟ್ಟುವುದು ನೋಡಾ. ಅಹುದೋ ಅಲ್ಲವೋ ಎಂಬ ಮನದ ಸಂದೇಹದ ಕೀಲ ಕಳೆದು ಶಿವಲಿಂಗದೊಳಗೊಂದು ಮಾಡಿ ಬಂಧ ಮೋಕ್ಷ ಕರ್ಮಂಗಳ ಒತ್ತಿ ಒರಸುವುದು ನೋಡಾ. ಇಂದುಧರನೊಳಗೆ ಬೆರಸಿದ ಅಚಲಿತ ಮಹೇಶ್ವರಂಗೆ ನಮೋ ನಮೋ ಎಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.