Index   ವಚನ - 456    Search  
 
ದನುಜ ಮನುಜ ದಿವಿಜರ ಅಲ್ಪಪದವಿಯನೇನೆಂದು ಅರಿಯನು ನೋಡಾ ಶರಣನು. ಮನುಮುನಿಗಳ ಕ್ಷಣಿಕ ಪದಗಿದವ ಬಗೆವನೇ ನಿಃಕಾಮಿ ಶರಣನು? ಕಾಮಧೇನು ಗೀಮಧೇನು ಕಲ್ಪತರು ಗಿಲ್ಪತರು ಚಿಂತಾಮಣಿ ಗಿಂತಾಮಣಿ ಪರುಷ ಗಿರುಷಗಳೆಂಬ ಪ್ರಪಂಚುಗಳ ಎಣಿಸುವನೆ ನಿಭ್ರಾಂತ ಶರಣನು? ಇಹಲೋಕದ ಸುಖ, ಪರಲೋಕದ ಗತಿ ಎಂಬ ಇಹಪರವನೆಣಿಸುವನೆ ಶರಣನು? ಇಹಪರವೆಂಬ ಇದ್ದಸೆಗೆಟ್ಟು ಪರಾಪರವಸ್ತುವೇ ತಾನಾದ ಪರಮ ಪರಿಣಾಮಿ ನೋಡಾ ಶರಣನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.