Index   ವಚನ - 458    Search  
 
ಅಂಗದ ಕಳೆ ಲಿಂಗದಲ್ಲಿ; ಲಿಂಗದ ಕಳೆ ಅಂಗದಲ್ಲಿ, ಅಂಗಕಳೆ ಲಿಂಗಕಳೆ ಎಂಬು ಭಯವಳಿದು ಆತನ ಅಂಗವೆಲ್ಲವು ಲಿಂಗಮಯವಾಗಿ ಅಂಗಲಿಂಗ ಪದಸ್ಥನಯ್ಯ ಶರಣನು. ಮನದಲ್ಲಿ ಲಿಂಗ; ಲಿಂಗದಲ್ಲಿ ಮನಬೆರಸಿ ಮನವು ಮಹಾಘನವನಿಂಬುಗೊಂಡಿಪ್ಪುದಾಗಿ ಪ್ರಪಂಚು ಪದಂಗಳನರಿಯನಯ್ಯ ಶರಣನು. ಮನಲಿಂಗ ಪದಸ್ಥನಾದ ಕಾರಣ ಪ್ರಾಣದೊಡನೆ ಲಿಂಗ; ಲಿಂಗದೊಡನೆ ಪ್ರಾಣ ಕೂಡಿ ಪ್ರಾಣನ ಗುಣವಳಿದು ಪ್ರಾಣಲಿಂಗ ಪದಸ್ಥನಯ್ಯ ಶರಣನು. ಭಾವ ಬ್ರಹ್ಮವನಪ್ಪಿ ಜಾಗ್ರ ಸ್ವಪ್ನ ಸುಷುಪ್ತಿಯೆಂಬ ಸರ್ವಾವಸ್ಥೆಯನಳಿದ ಪರಮಾವಸ್ಥನಯ್ಯ ಶರಣನು. ಎಲ್ಲಾ ಪದಂಗಳ ಮೀರಿ ಮಹಾಘನವನಿಂಬುಗೊಂಡ ಘನಲಿಂಗ ಪದಸ್ಥನಯ್ಯಾ ಶರಣನು. ಇಂತಪ್ಪ ಘನಮಹಿಮ ಶರಣಂಗೆ ಅವಲೋಕದಲ್ಲಿಯೂ ಇನ್ನಾರು ಸರಿಯಿಲ್ಲ; ಪ್ರತಿಯಿಲ್ಲ ಅಪ್ರತಿಮ ಶರಣಂಗೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.