Index   ವಚನ - 467    Search  
 
ಪರಮಾರ್ಥವ ನುಡಿದು ಪರರ ಕೈಯಾಂತು ಬೇಡುವುದು ಕರಕಷ್ಟವಯ್ಯ. ಪುರಾತರಂತೆ ನುಡಿಯಲೇಕೆ? ಕಿರಾತರಂತೆ ನಡೆಯಲೇಕೆ? ಆಸೆಯಿಚ್ಛೆಗೆ ಲೇಸ ನುಡಿವಿರಿ. ಇಚ್ಛೆಯ ನುಡಿವುದು ಉಚ್ಚೆಯ ಕುಡಿವುದು ಸರಿ ಕಾಣಿರೋ. ಇಚ್ಛೆಯ ನುಡಿವನೆ ಶಿವಶರಣನು? ಮಾತಿನಲ್ಲಿ ಬೊಮ್ಮವ ನುಡಿದು ಮನದಲ್ಲಿ ಆಸೆಯ ಸೋನೆ ಕರೆವುತಿಪ್ಪುದು. ಈ ವೇಷವ ಕಂಡೆನಗೆ ಹೇಸಿಕೆಯಾಯಿತ್ತು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.