ನಿರಾಕಾರ ಬಯಲು ಮೂರ್ತಿಗೊಂಡು
ಮಹಾಜ್ಞಾನವೇ ಚಿತ್‍ಸ್ವರೂಪವಾಯಿತ್ತು.
ಆ ಚಿಚ್ಛಕ್ತಿಸ್ವರೂಪವೇ ಶರಣನಾಗಿ ಮೂರ್ತಿಗೊಂಡನು ನೋಡಾ.
ಆ ಶರಣನ ಸಹಸ್ರಾಂಶದಲ್ಲಿ ಸದಾಶಿವನಾದನು.
ಆ ಸದಾಶಿವನ ಸಹಸ್ರಾಂಶದಲ್ಲಿ ಈಶ್ವರ ಮೂರ್ತಿಗೊಂಡನು
ಆ ಈಶ್ವರನ ಸಹಸ್ರಾಂಶದಲ್ಲಿ ರುದ್ರನಾದನು.
ಆ ರುದ್ರನ ಕೋಟ್ಯಂಶದಲ್ಲಿ ವಿಷ್ಣು ಹುಟ್ಟಿದನು.
ಆ ವಿಷ್ಣುವಿನ ಕೋಟ್ಯಂಶದಲ್ಲಿ ಬ್ರಹ್ಮನಾದನು.
ಆ ಬ್ರಹ್ಮನ ಕೋಟ್ಯನುಕೋಟ್ಯಂಶದಿಂದ
ನರರು ಸುರರು ಅಸುರರು ಹೆಣ್ಣು ಗಂಡು ಮೊದಲಾದ
ಸಕಲ ಚರಾಚರಂಗಳೆಲ್ಲವು ಹುಟ್ಟಿದವು ನೋಡಾ.
ಇಂತಿವೆಲ್ಲವೂ ಪರಶಿವನ ನೆನಹುಮಾತ್ರದಿಂದ
ತೋರಿ ಅಡಗತ್ತಿಹವು.
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ
ಇಂತೀ ಐವರನು ತನ್ನಲ್ಲಿ ಗರ್ಭೀಕರಿಸಿಕೊಂಡಿಪ್ಪನು,
ಚಿತ್‍ಸ್ವರೂಪನಪ್ಪ ಶರಣನು.
ಆ ಶರಣನೇ ಚೆನ್ನಬಸವಣ್ಣನು.
ಆ ಚೆನ್ನಬಸವಣ್ಣನೇ ಎನ್ನಂತರಂಗದ ಸುಜ್ಞಾನ
ಪ್ರಾಣಲಿಂಗವೆಂದರಿದು
ಮನೋಭಾವದಿಂದ ಆರಾಧಿಸಿ
ಪಾಣಲಿಂಗ ಸಂಬಂಧಿಯಾಗಿದ್ದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.