ಧರೆಯಾಕಾಶದ ಮಧ್ಯದಲ್ಲಿ
ಉರಿಯ ಸೀರೆಯನುಟ್ಟು
ಧರೆಯಾಕಾಶಕ್ಕೆ ಎಡೆಯಾಡುತಿದ್ದಾಳೆ ನೋಡಾ.
ಊರ ಒಳ ಹೊರಗೆ ತಾನಾಗಿ
ಆರು ಬಣ್ಣದ ಪಕ್ಷಿಯ ಶಿರದ ಅಮೃತವ ಕರೆದು
ತಾನು ಪರಮಾನಂದ ಲೀಲೆಯಿಂದ ನಲಿದಾಡುತಿದ್ದಾಳೆ ನೋಡಾ.
ಊರು ಬೆಂದು ಉಲುಹಳಿದುಳಿದು ಆರು ಬಣ್ಣದ ಪಕ್ಷಿಯಳಿದು
ಆರೂಢವಾಯಿತ್ತು ನೋಡಾ.
ಉರಿಯ ಸೀರೆಯ ಅಂಗನೆ ಉಪಮಾತೀತನ ನೆರೆದುದ ಕಂಡು
ಬೆರಗಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.