Index   ವಚನ - 514    Search  
 
ಸತ್ತುವೆಂಬ ಗುರುವಿನಲ್ಲಿ ಎನ್ನ ಸರ್ವಾಂಗವಡಗಿ ಚಿತ್ರದ ಪ್ರತಿಮೆಯ ಅವಯವಂಗಳ ಶೃಂಗಾರದಂತೆ ಆಕಾರವೆಂಬಂತೆ ಇರ್ದೆನಯ್ಯ. ಚಿತ್ತೆಂಬ ಲಿಂಗದೊಳಗೆ ಮನವಡಗಿ ನವನಾಳದ ಸುಳುಹು ಕೆಟ್ಟು ಸುಷುಪ್ತಿಯನೆಯ್ದಿದ್ದೆನಯ್ಯ. ಇದು ಕಾರಣ: ಎನ್ನ ಜಾಗ್ರ ಸ್ವಪ್ನ ಸುಷುಪ್ತಿಯೆಂತಿಪ್ಪುದ ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳಾ. ಆನಂದವೆಂಬ ಜಂಗಮದಲ್ಲಿ ಅರುಹು ಏಕತ್ವವಾಗಿ ಅತ್ಮೋಹಂಯೆಂಬುದನರಿಯೆನು ನೋಡಾ, ನಾನು ಪರಮಾತ್ಮನಾದ ಕಾರಣ. ನಿತ್ಯವೆಂಬ ಪ್ರಸಾದದಲ್ಲಿ ಪ್ರಾಣವಡಗಿ ನಿತ್ಯಾನಿತ್ಯವನರಿಯದೆ ಸಚ್ಚಿದಾನಂದ ನಿತ್ಯ ಪರಿಪೂರ್ಣನಾಗಿ ಅನಾದಿ ಭಕ್ತನಾದೆನಯ್ಯ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.