Index   ವಚನ - 537    Search  
 
ಬಸವಣ್ಣನ ಪ್ರಸಾದದಿಂದ ಭಕ್ತಿಜ್ಞಾನ ವೈರಾಗ್ಯ ಸಂಪನ್ನನಾದೆನಯ್ಯ. ಚೆನ್ನಬಸವಣ್ಣನ ಪ್ರಸಾದದಿಂದ ಷಟ್‍ಸ್ಥಲಜ್ಞಾನಸಂಪನ್ನನಾದೆನಯ್ಯ. ಪ್ರಭುದೇವರ ಪ್ರಸಾದದಿಂದ ಪರಶಿವತತ್ವ ಸ್ವರೂಪವೇ ಎನ್ನ ಸ್ವರೂಪವೆಂದರಿದು ಸಮಸ್ತ ಸಂಸಾರಪ್ರಪಂಚ ಕೊಡಹಿದೆನು ನೋಡಾ. ನೀಲಲೋಚನೆಯಮ್ಮನ ಪ್ರಸಾದದಿಂದ ನಿಜಲಿಂಗೈಕ್ಯನಾದೆನಯ್ಯ. ಮಹಾದೇವಿಯಕ್ಕಗಳ ಪ್ರಸಾದದಿಂದ ಸುತ್ತಿದ ಮಾಯಾಪಾಶವ ಹರಿದು ನಿರ್ಮಾಯನಾಗಿ ನಿರ್ವಾಣಪದದಲ್ಲಿ ನಿಂದೆನಯ್ಯ. ಸಿದ್ಧರಾಮಯ್ಯನ ಪ್ರಸಾದದಿಂದ ಶುದ್ಧ ಶಿವತತ್ವವ ಹಡೆದೆನಯ್ಯ. ಮೋಳಿಗೆಯ ಮಾರಿತಂದೆಗಳ ಪ್ರಸಾದದಿಂದ ಕಾಯದ ಕಳವಳನಳಿದು ಕರ್ಮನಿರ್ಮಲನಾಗಿ ವೀರಮಾಹೇಶ್ವರನಾದೆನು ನೋಡಾ. ಇವರು ಮುಖ್ಯವಾದ ಏಳುನೂರೆಪ್ಪತ್ತುಮರಗಣಂಗಳ ಪರಮಪ್ರಸಾದದಿಂದ ಎನ್ನ ಕರಣಂಗಳೆಲ್ಲವು ಲಿಂಗಕರಣಂಗಳಾಗಿ ಕರಣೇಂದ್ರಿಯಂಗಳ ಕಳೆದುಳಿದು ಇಂದ್ರಿಯಂಗಳಿಗೆ ನಿಲುಕದ ಸ್ಥಾನದಲ್ಲಿರ್ದು ಪರಮಾನಂದ ಪ್ರಭಾಮಯನಾಗಿರ್ದೆನು ನೋಡಾ. ನಿಮ್ಮ ಶರಣರ ಪ್ರಸಾದದಿಂದ ನಾನು ಪ್ರಸಾದಿಯಾಗಿರ್ದೆನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.