Index   ವಚನ - 577    Search  
 
ಕ್ಷುತ್ತು, ಪಿಪಾಸೆ, ಶೋಕ, ಮೋಹ, ಜರಾ, ಮರಣವೆಂಬ ಷಡೂರ್ಮಿಗಳಿಲ್ಲದೆಯಿಪ್ಪನು. ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವೆಂಬ ಷಡುವರ್ಗಂಗಳಿಲ್ಲದೆಯಿರುತಿರ್ಪನು. ನಾಹಂ ಕೋಹಂ ಸೋಹಂ ಎಂಬ ಭಾವರಹಿತನಾಗಿಪ್ಪನು. ಅಷ್ಟವಿಧಾರ್ಚನೆ, ಷೋಡಶೋಪಚಾರ ರಹಿತನಾಗಿಪ್ಪನು. ಕರ್ಪುರ ಅಗ್ನಿ ಸಂಯೋಗವಾಗಿ ಕರ್ಪುರದ ಗುಣವಳಿದು ಅಗ್ನಿಯಾದಂತೆ ಲಿಂಗವ ನೆನನೆನದು ಲಿಂಗವೇ ತಾನಾಗಿಪ್ಪುದೀಗ ನಿಜಲಿಂಗೈಕ್ಯಸ್ಥಲವಿದೆಂಬೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.