Index   ವಚನ - 1419    Search  
 
ಮತಿಯೊಳಗೆ ದುರ್ಮತಿ ಹುಟ್ಟಿ, ಕಲಿ ಗಸಣಿಗೊಳಗಾದ ಪರಿಯ ನೋಡಾ! ಜ್ಞಾನವನು ಅಜ್ಞಾನ ಬಂದು ನುಂಗಿದಡೆ, ಭಾನು ಗ್ರಹಣಕ್ಕೆ ಒಳಗಾದಂತೆ ಆದುದಲ್ಲಾ! ಕ್ಷೀರವುಳ್ಳ ಪಶು ಕರುವನಗಲಿ ಅರಿಯದ ಮೋಹದಂತಿದ್ದುದಲ್ಲಾ. ಹೇಳುವಲ್ಲಿ ಯುಕ್ತ ಕೇಳುವಲ್ಲಿ ಮುಕ್ತನೆಂಬುದೆಲ್ಲವೂ, ಅಜ್ಞಾನಭಾವಕ್ಕೆ ಬಂದುದಲ್ಲಾ! ನೀರ ಮೇಲಣ ಲಿಪಿಯ ಓದಬಲ್ಲವರುಂಟೆ? ಸಾರಾಯ ವೇದ್ಯರಿಗಲ್ಲದೆ? ಕನ್ನಡಿಯೊಳಗೆ ನೋಡೆ ಭಿನ್ನವಿದ್ದುದೆ ಅಯ್ಯಾ? ತನ್ನಕಣ್ಣಿಂಗೆ ಕಾಣದಂತೆ ಇದ್ದಿತ್ತು ದರ್ಪಣದೊಳಗಣ ಬೆಳಗು. ಬೆಳಗಿನೊಳಗಣ ಬೆಳಗು, ಗುಹೇಶ್ವರನಿಪ್ಪೆಡೆಯ ತಿಳಿದು ನೋಡಿರೆ.