Index   ವಚನ - 614    Search  
 
ಆಧಾರ ಸ್ವಾಧಿಷ್ಠಾನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೇಯವೆಂಬ ಷಡುಚಕ್ರಂಗಳ ಚತುರ್ದಳ ಚತುಕ್ಷರ, ಷಡುದಳ ಷಡಕ್ಷರ,ದಶದಳ ದಶಾಕ್ಷರ, ದ್ವಾದಶದಳ ದ್ವಾದಶಾಕ್ಷರ,ಷೋಡಶದಳ ಷೋಡಶಾಕ್ಷರ, ದ್ವಿದಳ ದ್ವ್ಯಯಾಕ್ಷರವೆಂಬ, ಚಕ್ರ ದಳ, ಅಕ್ಷರಂಗಳೆಲ್ಲವು ಬಯಲಾದವು ನೋಡಾ. ಪೀತ ಹರಿತ ಮಾಂಜಿಷ್ಠ ಶ್ವೇತ ಕಪೋತವರ್ಣಮುಖ್ಯವಾದ ಸಮಸ್ತವರ್ಣಂಗಳೆಲ್ಲ ಬಯಲಾದವು ನೋಡಾ. ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವರೆಂಬ ಪಂಚಾಧಿದೇವತೆಗಳು ಬಯಲಾದರು ನೋಡಾ. ಅದೆಂತಡೆಂದಡೆ: ಬ್ರಹ್ಮ ವಿಷ್ಣುವಿನಲ್ಲಡಗಿ, ವಿಷ್ಣು ರುದ್ರನಲ್ಲಡಗಿ, ರುದ್ರ ಈಶ್ವರನಲ್ಲಡಗಿ, ಈಶ್ವರ ಸದಾಶಿವನಲ್ಲಡಗಿ, ಸದಾಶಿವ ಚಿತ್ತಿನಲ್ಲಡಗಿ, ಆ ಚಿತ್ ಸ್ವರೂಪವಪ್ಪ ಆದಿಶರಣನೆ ಮಹಾಲಿಂಗದೊಳಡಗಿ, ನಿರ್ವಯಲಾದುದೆ ಇವರೆಲ್ಲರ ಬಯಲು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.