Index   ವಚನ - 661    Search  
 
ಸದ್ಯೋಜಾತನ ಶುದ್ಧ ಪ್ರಸಾದವೆನ್ನ ನಾಸಿಕವ ನುಂಗಿತ್ತಾಗಿ ಗಂಧಷಡ್ವಿಧ ಬಯಲಾಗಿ ಗಂಧ ದುರ್ಗಂಧವನರಿಯದು ನೋಡಾ. ವಾಮದೇವನ ಒಲುಮೆಯ ಪ್ರಸಾದ ಎನ್ನ ಜಿಹ್ವೆಯ ತುಂಬಿತ್ತಾಗಿ ಷಡ್ವಿಧ ರಸ ಬಯಲಾಗಿ ಮಧುರ ಆಮ್ರ ಲವಣ ತಿಕ್ತ ಕಟು ಕಷಾಯವೆಂಬ ಷಡುರಸ್ನಾನದ ರುಚಿಯನರಿಯದು ನೋಡಾ. ಅಘೋರನ ಅವಿರಳಪ್ರಸಾದ ಎನ್ನ ಕಂಗಳ ತುಂಬಿ ಷಡ್ವಿಧರೂಪು ಬಯಲಾಗಿ ಸುರೂಪು ಕುರೂಪೆಂದರಿಯದು ನೋಡಾ. ತತ್ಪುರುಷನ ಒಪ್ಪುವ ಪ್ರಸಾದವೆನ್ನ ತ್ವಕ್ಕು ತುಂಬಿತ್ತಾಗಿ ಸ್ಪರ್ಶನ ಷಡ್ವಿಧ ಬಯಲಾಗಿ ಮೃದು ಕಠಿಣ ಶೀತೋಷ್ಣವೆಂಬ ಸೋಂಕನರಿಯದು ನೋಡಾ. ಈಶಾನ್ಯನ ವಿಮಲಪ್ರಸಾದ ಎನ್ನ ಶ್ರೋತ್ರ ತುಂಬಿತ್ತಾಗಿ ಶಬ್ದ ಷಡ್ವಿಧ ಬಯಲಾಗಿ ಸುಶಬ್ದ ದುಶ್ಯಬ್ಧವನರಿಯದು ನೋಡಾ. ಪರಮೇಶ್ವರನ ಪರಮ ಪ್ರಸಾದವೆನ್ನ ಪ್ರಾಣವ ತುಂಬಿ ಪರಿಣಾಮ ಷಡ್ವಿಧ ಬಯಲಾಗಿ ತೃಪ್ತಿ ಅತೃಪ್ತಿಯನರಿಯದು ನೋಡಾ. ಇವೆಲ್ಲವ ಮರೆದು ಮಹಾಘನಪ್ರಸಾದದಲ್ಲಿ ಸಮರಸವಾಯಿತ್ತಾಗಿ ಅರ್ಪಿತವನರಿಯದು, ಅನರ್ಪಿತನರಿಯದು. ಭಾವವನರಿಯದು, ನಿರ್ಭಾವವನರಿಯದು. ನಿರವಯ ಪ್ರಸಾದವನೆಯ್ದಿ ನಿರ್ವಯಲಾಯಿತ್ತು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.