Index   ವಚನ - 685    Search  
 
ಆಚಾರಲಿಂಗ ಗುರುಲಿಂಗ ಶಿವಲಿಂಗ ಇವು ಮೂರು ಇಷ್ಟಲಿಂಗ. ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಇವು ಮೂರು ಪ್ರಾಣಲಿಂಗ. ಇಷ್ಟಲಿಂಗವು ಸತ್ಕ್ರಿಯಾ ಸ್ವರೂಪು. ಪ್ರಾಣಲಿಂಗವು ಸುಜ್ಞಾನ ಸ್ವರೂಪು. ಮತ್ತೆ ಕ್ರಿಯಾ ಸ್ವರೂಪವೇ ಲಿಂಗವು. ಸುಜ್ಞಾನ ಸ್ವರೂಪವೇ ಜಂಗಮವು. ಇದು ಕಾರಣ, ಆಕಾರ ಸ್ವರೂಪವೇ ಲಿಂಗವು; ನಿರಾಕಾರ ಸ್ವರೂಪವೇ ಜಂಗಮವು. ಆದಿಯೆ ಲಿಂಗವು; ಅನಾದಿಯೇ ಜಂಗಮವು. ಇದು ಕಾರಣ, ಜಂಗಮ ಪ್ರಸಾದ ಲಿಂಗಕ್ಕಲ್ಲದೆ ಲಿಂಗ ಪ್ರಸಾದ ಜಂಗಮಕ್ಕೆಂಬುದು ಅದು ಅಜ್ಞಾನ ನೋಡಾ. ಆದಿಲಿಂಗ ಅನಾದಿಜಂಗಮ ಇವೆರಡು ಒಂದಾಗಿ ನಿಂದ ನಿಲುವು ನಿರಾಕಾರ ಪರವಸ್ತು. ಆ ನಿರಾಕಾರ ಪರವಸ್ತುವನೊಡಗೂಡಿ ನಾನು ನಿರಾಳನಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.