ಧರೆ ಜಲ ಅಗ್ನಿ ವಾಯು ಅಂಬರವಿಲ್ಲದಂದು,
ಅಂತರಂತರ ಪದಿನಾಲ್ಕುಭುವನ ನೆಲೆಗೊಳ್ಳದಂದು,
ದಿವಾ ರಾತ್ರಿ ಚಂದ್ರ ಸೂರ್ಯ
ನಕ್ಷತ್ರ ಗ್ರಹರಾಶಿಗಳಿಲ್ಲದಂದು,
ಅಷ್ಟದಿಕ್ಕು ಅಷ್ಟಕುಲಪರ್ವತಗಳಿಲ್ಲದಂದು,
ಸಪ್ತಸಮುದ್ರಂಗಳು ಸಪ್ತದ್ವೀಪಂಗಳಿಲ್ಲದಂದು,
ಮಹಾಮೇರುವ ನವಖಂಡಪೃಥ್ವಿಯ
ಮಧ್ಯದಲ್ಲಿ ಸ್ಥಾಪಿಸದಂದು,
ಸಿಡಿಲು ಮಿಂಚು ಚಳಿ ಮಳೆಗಳಿಲ್ಲದಂದು,
ನರ ಸುರ ತಿರ್ಯಗ್ಜಾತಿಗಳು ಸ್ಥಾವರ ಜಂಗಮಾತ್ಮಕವಾದ
ಸಮಸ್ತ ಪ್ರಪಂಚ ಪಸರಿಸದಂದು,
ನೀನೊಬ್ಬನೆ ಇರ್ದೆಯಲ್ಲ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.