ಸಂಸಾರ ಸೌಖ್ಯವಲ್ಲ, ಸಂಸಾರ ಸೌಖ್ಯವಲ್ಲ.
ಇಹಲೋಕ ಪರಲೋಕ ಸೌಖ್ಯವಲ್ಲ, ಸ್ಥಿರವಲ್ಲ.
ಗೃಹಪಾಶ, ಕ್ಷೇತ್ರಭ್ರಮೆ ಬಳಸಿ ಬಳಸಿ ಬರುತ್ತಿದೆ,
ಬಿಡು ಬಿಡು ವಾಂಛೆಯ,
ಆಗ ಹುಟ್ಟಿ ಬೇಗ ಸಾವವರ ಕಂಡು
ಮತ್ತೇಕೆ ಸಂಸಾರದಾಸೆ?
ನಿನ್ನ ದೇಹ ಸ್ಥಿರವಲ್ಲ. ನೀ ಬಂದುದನರಿದು
ಹೋಹ ಗತಿಪಥವ ತೆರಹುಮಾಡು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಒಂದಹರೆ.