ಕತ್ತಲೆಯ ಮನೆಯ ಹೊಕ್ಕು ತೊಳಲುವ ವ್ಯರ್ಥ
ಜೀವರನೇನೆಂಬೆ ನೋಡಾ.
ಅರ್ತಿಕಾರಿಕೆಗೆ ಬಲುಗುಂಡ ಹೊತ್ತು ಬಳಲುವಂತೆ
ಬಳಲುತೈದಾರೆ ನೋಡಾ.
ಶಿವಜ್ಞಾನವಿಲ್ಲದೆ ದೇಹಭಾರವ
ಹೊತ್ತು ಗತಿಗೆಡುತೈದಾರೆ.
ಮುನ್ನ ಮಾಡಿದ ಕರ್ಮ
ಬೆನ್ನಲ್ಲಿ ಮನೆಯ ಹೊರುವಂತಾಯಿತ್ತು.
ಇನ್ನಾದರೂ ಅರಿದು ನಡೆಯಲು,
ಬೆನ್ನ ಹತ್ತಿದ ಮನೆಯ ತೊ[ಲ]ಗೆ
ನೂಂಕಿ ತನ್ನತ್ತ ತೆಗೆದುಕೊಂಬನು
ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.