ಘ್ರಾಣಕ್ಕೂ ಗುದಕ್ಕೂ ಪೃಥ್ವಿ ಎಂಬ ಮಹಾಭೂತ.
ಅಲ್ಲಿ ನಿವೃತ್ತಿ ಎಂಬ ಕಲೆ ಇಹುದು.
ಆ ಕಲೆಯಲ್ಲಿ, ಕ್ರಿಯಾಶಕ್ತಿಯುಕ್ತವಾದ
ಆಚಾರಲಿಂಗವ ಧರಿಸಿದಾತ ಭಕ್ತನು.
ಜಿಹ್ವೆಗೂ ಗುಹ್ಯಕ್ಕೂ ಅಪ್ಪು ಎಂಬ ಮಹಾಭೂತ.
ಅಲ್ಲಿ ಪ್ರತಿಷ್ಠೆಎಂಬ ಕಲೆ ಇಹುದು.
ಆ ಕಲೆಯಲ್ಲಿ, ಜ್ಞಾನಶಕ್ತಿಯುಕ್ತವಾದ
ಗುರುಲಿಂಗವ ಧರಿಸಿದಾತ ಮಾಹೇಶ್ವರನು.
ನೇತ್ರಕ್ಕೂ ಪಾದಕ್ಕೂ ಅಗ್ನಿ ಎಂಬ ಮಹಾಭೂತ.
ಅಲ್ಲಿ ವಿದ್ಯೆ ಎಂಬ ಕಲೆ ಇಹುದು.
ಆ ಕಲೆಯಲ್ಲಿ, ಇಚ್ಛಾಶಕ್ತಿಯುಕ್ತವಾದ
ಶಿವಲಿಂಗವ ಧರಿಸಿಕೊಂಡಾತ ಪ್ರಸಾದಿ.
ತ್ವಕ್ಕಿಗೂ ಪಾಣಿಗೂ ವಾಯುವೆಂಬ ಮಹಾಭೂತ.
ಅಲ್ಲಿ ಶಾಂತಿ ಎಂಬ ಕಲೆ ಇಹುದು.
ಆ ಕಲೆಯಲ್ಲಿ, ಆದಿಶಕ್ತಿಯುಕ್ತವಾದ
ಜಂಗಮಲಿಂಗವ ಧರಿಸಿಕೊಂಡಾತ ಪ್ರಾಣಲಿಂಗಿ.
ಶ್ರೋತ್ರಕ್ಕೂ ವಾಕ್ಕಿಗೂ ಆಕಾಶ ಎಂಬ ಮಹಾಭೂತ.
ಅಲ್ಲಿ ಶಾಂತ್ಯತೀತ ಎಂಬ ಕಲೆ ಇಹುದು.
ಆ ಕಲೆಯಲ್ಲಿ, ಪರಾಶಕ್ತಿಯುಕ್ತವಾದ
ಪ್ರಸಾದಲಿಂಗವ ಧರಿಸಿಕೊಂಡಾತ ಶರಣನು.
ಆತ್ಮಾಂಗಕ್ಕೆ ಮನ ಎಂಬ ಮಹಾಭೂತ.
ಅಲ್ಲಿ ಶಾಂತ್ಯತೀತೋತ್ತರ ಎಂಬ ಕಲೆ ಇಹುದು.
ಆ ಕಲೆಯಲ್ಲಿ, ಚಿಚ್ಛಕ್ತಿಯುಕ್ತವಾದ
ಮಹಾಲಿಂಗವ ಧರಿಸಿಕೊಂಡಾತ ಐಕ್ಯನು.
ಇಂತೀ ಷಡುಸ್ಥಲಭಕ್ತರು ಷಡ್ವಿಧಲಿಂಗವ ಧರಿಸಿ
ನಿರಾಳಲಿಂಗಾರ್ಚನೆಯ ಮಾಡುತ್ತಿಹರು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಶರಣರು.