ವಚನ - 1441     
 
ಮಾಡುವ ಭಕ್ತನಲ್ಲಿ ಕೂಡಿಪ್ಪ ಜಂಗಮವು. ಖೋಡಿಗಳೆವುತ್ತಿಪ್ಪರು ಒಬ್ಬರನೊಬ್ಬರು, ತಮ್ಮವರ ತಾವರಿಯದ ಖಂಡಿತರು. ಒಡಲ ಗುಣಧರ್ಮದಿಂದ ಅನ್ನಾಶನ ಪಂಕ್ತಿಗೆ ಹೋರುವವರಿಗೇಕೆ ಶಿವನ ವೇಷ? ಜಂಗಮವೆನಿಸಿಕೊಳ್ಳವೆ ಚರಾಚರವೆಲ್ಲವು? ಅರಸನ ಹೆಸರಿನಲ್ಲಿ ಕರೆಯಿಸಿಕೊಂಡ ಅನಾಮಿಕನಂತೆ ನಾಮ ರೂಪ ಇರ್ದಡೇನಾಯಿತ್ತು? ಅಲ್ಲಿ ಶಿವನಿಲ್ಲ! ಎಲ್ಲಾ ಅವನಿಯಲ್ಲಿ ಹೇಮವಿಪ್ಪುದೆ? ಇಪ್ಪುದೊಂದು ಠಾವಿನಲ್ಲಿ. ಪರಮನ ವೇಷಕ್ಕೆ ತಕ್ಕ ಚರಿತ್ರವುಳ್ಳಲ್ಲಿ ಶಿವನಿಪ್ಪನು. ಅದೆಂತೆಂದಡೆ: `ಧಾರಯೇತ್ ಸಮತಾಕಂಥಾಂ ಕ್ಷಮಾಖ್ಯಾಂ ಭಸ್ಮಘುಟಿಕಾಂ| ದಯಾ ಕಮಂಡಲಮೇವ ಜ್ಞಾನದಂಡೋ ಮನೋಹರಃ|| ಭಿಕ್ಷಾಪಾತ್ರಂ ಚ ವೈರಾಗ್ಯ ಭಕ್ತಿ ಭಿಕ್ಷಾಂ ಚ ಯಾಚಯೇತ್ ||' ಎಂದುದಾಗಿ ಅರಿವಿನ ವೇಷವ ಜ್ಞಾನದಲ್ಲಿ ಧರಿಸಿ, ಕುರುಹಿನ ವೇಷವ ಅಂಗದಲ್ಲಿ ಧರಿಸಿ `ಭಕ್ತಿಭಿಕ್ಷಾಂದೇಹಿ' ಆದ ಅರಿವು ಮೂರ್ತಿಗೆ ವೇಷವು ತಾ ಬೇಡ, ಗುಹೇಶ್ವರಲಿಂಗದ ಆಣತಿಯುಂಟಾಗಿ.