Index   ವಚನ - 129    Search  
 
ಅನ್ನಮಯ ಪ್ರಾಣಮಯ ಮನೋಮಯ ವಿಜ್ಞಾನಮಯ ಆನಂದಮಯ ಎಂಬ ಪಂಚಕೋಶ ಕೆಡುವುದಕ್ಕೆ ವಿವರ: ಸರ್ವಪದಾರ್ಥವನು ಸಾವಧಾನ ಮುಖದಲ್ಲಿ ಲಿಂಗಾರ್ಪಿತ ಮಾಡಿ ಲಿಂಗ ಭೋಗೋಪಭೋಗಿಯಾದಲ್ಲಿ ಅನ್ನಮಯಕೋಶ ಕೆಟ್ಟಿತ್ತು. ಪ್ರಾಣಮಯ ಲಿಂಗಾಂಗವಾಗಿ ಲಿಂಗಪ್ರಾಣಿಯಾದಲ್ಲಿ ಪ್ರಾಣಮಯಕೋಶ ಕೆಟ್ಟಿತ್ತು. ಮನೋಮಧ್ಯದಲ್ಲಿ ಲಿಂಗದ ನೆನಹು ನೆಲೆಗೊಂಡು ಮನವೆ ಲಿಂಗವಾದಲ್ಲಿ ಮನೋಮಯಕೋಶ ಕೆಟ್ಟಿತ್ತು. ಸುಜ್ಞಾನ ಪರಿಪೂರ್ಣವಾಗಿ ಜ್ಞಾನ ಜ್ಞೇಯಂಗಳೆರಡೂ ಒಂದಾದಲ್ಲಿ ವಿಜ್ಞಾನಮಯಕೋಶ ಕೆಟ್ಟಿತ್ತು. ಪರಮಾನಂದ ಪದದಲ್ಲಿ ಓಲಾಡುತ್ತ ಆ ಶಿವಾನಂದದಲ್ಲಿ ಇರಲಿಕ್ಕಾಗಿ ಆನಂದಮಯಕೋಶ ಕೆಟ್ಟಿತ್ತು. ಇಂತೀ ಪಂಚಕೋಶ ಪ್ರಕೃತಿಗುಣ ಕೆಟ್ಟು ಲಿಂಗಗುಣ ನಿಂದುದು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ, ನಿಮ್ಮ ಶರಣಂಗೆ.