Index   ವಚನ - 214    Search  
 
ಪ್ರಕಾಶದ್ವಾರ ಗಂಧದ್ವಾರ ಶಬ್ದದ್ವಾರವೆಂಬ ಅರುದ್ವಾರ ಕೂಡಿದ ಠಾವಿನಲ್ಲಿ, ನಾದ ಬಿಂದು ಕಲೆಯೆಂಬ ಸಿಂಹಾಸನದ ಮೇಲೆ ಮೂರ್ತಿಗೊಂಡು, ಶಬ್ದ ರೂಪು ಗಂಧಂಗಳ ಗ್ರಹಿಸುವಾತ ನೀನಲ್ಲದೆ ಮತ್ತಾರು ಹೇಳ? ಗಳದಲ್ಲಿ ನಿಂದು ಷಡುರಸ್ನಾನದ ರುಚಿಯ ಜಿಹ್ವೆಯಲ್ಲಿ ಸ್ವಾದಿಸುವಾತ ನೀನಲ್ಲದೆ ಮತ್ತಾರು ಹೇಳ? ಸರ್ವಾಂಗದಲ್ಲಿ ನಿಂದು, ತ್ವಗಿಂದ್ರಿಯ ಮುಖದಲ್ಲಿ ಸ್ಪರ್ಶನವ ತಳೆದುಕೊಂಬಾತ ನೀನಲ್ಲದೆ ಮತ್ತಾರು ಹೇಳ? ಮನವೆಂಬ ಮುಖದಲ್ಲಿ ನಿಂದು ಪರಿಣಾಮವನನುಭವಿಸುವಾತ ನೀನಲ್ಲದೆ ಮತ್ತಾರು ಹೇಳ? ಸರ್ವಾವಯವಂಗಳಲ್ಲಿ ಸರ್ವಮುಖವಾಗಿ ಭೋಗಿಸಿ ಪ್ರಸಾದವ ಕರುಣಿಸಿದ ಕೃಪಾಮೂರ್ತಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನೀನಲ್ಲದೆ ಮತ್ತಾರು ಹೇಳಾ?