Index   ವಚನ - 225    Search  
 
ದೇವಾ, ನಿನ್ನ ಭಕ್ತನು ಶ್ರೋತ್ರಮುಖದಲ್ಲಿ ಶಬ್ದ ಪದಾರ್ಥವ ನಿನಗೆ ಕೊಡುವನು. ಆತಂಗೆ ನೀನು ಶಬ್ದಪ್ರಸಾದವ ಕೊಡುವೆ. ತನ್ನ ತ್ವಕ್ಕಿನ ಮುಖದಲ್ಲಿ ಸ್ಪರ್ಶನಪದಾರ್ಥವ ನಿನಗೆ ಕೊಡುವನು. ಆತಂಗೆ ನೀನು ಸ್ಪರ್ಶನ ಪ್ರಸಾದವ ಕೊಡುವೆ. ನೇತ್ರಮುಖದಲ್ಲಿ ರೂಪುಪದಾರ್ಥವ ನಿನಗೆ ಕೊಡುವನು. ಆತಂಗೆ ನೀನು ರೂಪುಪ್ರಸಾದವ ಕೊಡುವೆ. ಜಿಹ್ವೆಯ ಮುಖದಲ್ಲಿ ರಸಪದಾರ್ಥವ ನಿನಗೆ ಕೊಡುವನು. ಆತಂಗೆ ನೀನು ರುಚಿಪ್ರಸಾದವ ಕೊಡುವೆ. ಘ್ರಾಣಮುಖದಲ್ಲಿ ಗಂಧಪದಾರ್ಥವ ನಿನಗೆ ಕೊಡುವನು. ಆತಂಗೆ ನೀನು ಗಂಧಪ್ರಸಾದವ ಕೊಡುವೆ. ಇಂತು ಭಕ್ತ ನಿನಗೆ ಸರ್ವಪದಾರ್ಥವ ಕೊಟ್ಟರೆ ನೀನು ಪ್ರಸಾದವ ಕೊಡುವೆ. ``ಭಕ್ತಕಾಯಃ ಮಮ ಕಾಯಃ" ವೆಂಬ ನಿನ್ನ ವಚನ ದಿಟವಾಗೆ, ನೀನು ಪ್ರಸಾದಿಯನರಿದು ಸಲಹುತ್ತಿಪ್ಪೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.