ಅಂಗದಲ್ಲಿ ಲಿಂಗ ಬೆರೆದು, ಲಿಂಗದಲ್ಲಿ ಅಂಗ ಬೆರೆದು
ಅಂಗ ಲಿಂಗ ಸಂಗದಿಂದ ಸಹವರ್ತಿಯಾದ
ಲಿಂಗಪ್ರಸಾದಿಯ ಇಂಗಿತವನೇನೆಂದು ಹೇಳಬಹುದು?
ಲಿಂಗ ನಡೆಯಲು ಒಡನೆ ಪ್ರಸಾದಿ ನಡೆವ
ಲಿಂಗ ನೋಡಲು ಒಡನೆ ಪ್ರಸಾದಿ ನೋಡುವ
ಲಿಂಗ ಕೇಳಲು ಒಡನೆ ಪ್ರಸಾದಿ ಕೇಳುವ
ಲಿಂಗ ಮುಟ್ಟಲು ಒಡನೆ ಪ್ರಸಾದಿ ಮುಟ್ಟುವ
ಲಿಂಗ ರುಚಿಸಲು ಒಡನೆ ಪ್ರಸಾದಿ ರುಚಿಸುವ.
ಲಿಂಗ ಘ್ರಾಣಿಸಲು ಒಡನೆ ಪ್ರಸಾದಿ ಘ್ರಾಣಿಸುವ.
ಇಂತು ಸರ್ವಭೋಗವ ಲಿಂಗದೊಡನೆ ಕೂಡಿ ಭೋಗಿಸಬಲ್ಲ,
ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಚೆನ್ನಬಸವಣ್ಣನು.