Index   ವಚನ - 230    Search  
 
ಶಬ್ದವನು ಕಿವಿಗಳು ಬಲ್ಲವೆ? ಅರಿಯವು. ಅಲ್ಲಿದ್ದ ಆಕಾಶ ತಾ ಬಲ್ಲುದೆ? ಅರಿಯದು. ಸ್ಪರ್ಶನವ ತ್ವಕ್ಕು ಬಲ್ಲುದೆ? ಅರಿಯದು. ಅಲ್ಲಿದ್ದ ವಾಯು ತಾ ಬಲ್ಲುದೆ? ಅರಿಯದು. ರೂಪನು ಕಣ್ಣು ಬಲ್ಲುದೆ? ಅರಿಯದು. ಅಲ್ಲಿದ್ದ ಅಗ್ನಿ ತಾ ಬಲ್ಲುದೆ? ಅರಿಯದು. ಸ್ವಾದವನು ನಾಲಿಗೆ ಬಲ್ಲುದೆ? ಅರಿಯದು. ಅಲ್ಲಿದ್ದ ಅಪ್ಪು ತಾ ಬಲ್ಲುದೆ? ಅರಿಯದು. ಗಂಧವನು ಘ್ರಾಣ ಬಲ್ಲುದೆ? ಅರಿಯದು. ಅವರಲ್ಲಿ ನಿಂದು, ವಿಷಯಂಗಳನು ಭಕ್ತನ ಇಂದ್ರಿಯಂಗಳೊಡನೆ ಕೂಡಿ ಅರಿವಾತ ನೀನೇ. ನೀನೆ ಭಕ್ತವತ್ಸಲ, ದಯಾನಿಧಿ, ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.