Index   ವಚನ - 256    Search  
 
ಅಂತರಂಗ ಸನ್ನಿಹಿತ ಪ್ರಾಣಲಿಂಗಕ್ಕೆ ಕ್ಷಮೆ ಎಂಬ ಸತ್ಯೋದಕದಿಂದ ಅಭಿಷೇಕವ ಮಾಡುವೆನಯ್ಯ. ಮನವ ನಿಲಿಸಿ ಗಂಧವನರ್ಪಿಸುವೆ. ನಿರಹಂಕಾರವೆಂಬ ಅಕ್ಷತೆಯನಿಡುವೆ. ವೈರಾಗ್ಯವೆಂಬ ಪುಷ್ಪವನರ್ಪಿಸಿ, ಸತ್ಯವೆಂಬ ಆಭರಣವ ತೊಡಿಸುವೆ. ವಿವೇಕವೆಂಬ ವಸ್ತ್ರವ ಹೊದಿಸಿ, ಶ್ರದ್ಧೆಯೆಂಬ ಧೂಪವ ಬೀಸುವೆ. ಮಹಾಜ್ಞಾನವೆಂಬ ದೀಪವ ಬೆಳಗಿ, ಪ್ರಪಂಚು ಭ್ರಾಂತಳಿದ ನೈವೇದ್ಯವನೀವೆ. ವಿಷಯಾರ್ಪಣವೆಂಬ ತಾಂಬೂಲವ ಕೊಟ್ಟು ಈ ಪರಿಯಲ್ಲಿ ಮಾಡುವೆನಯ್ಯ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ಪ್ರಾಣಲಿಂಗ ಪೂಜೆಯನು.