ವೇದ ಶಾಸ್ತ್ರ ಆಗಮ ವಿಜ್ಞಾನ ತರ್ಕ ವ್ಯಾಕರಣಾದಿಗಳ ಕಲಿತು
ಬಲ್ಲವರೆನಿಸಿಕೊಂಡರೇನು?
ಪ್ರಾಣಲಿಂಗದ ನೆಲೆಯನರಿದ ಯೋಗಿಯ ಮುಂದೆ
ಇವರೆಲ್ಲ ಮೂಢರಲ್ಲದೆ ಬಲ್ಲವರಲ್ಲ.
ಅದೇನು ಕಾರಣವೆಂದಡೆ:
ಅವರು ಸ್ವಾನುಭಾವಜ್ಞಾನಾನುಭಾವಿಗಳಲ್ಲವಾದ ಕಾರಣ.
ಇಂತಿವರು ಒಂದು ಕೋಟಿ ಶಾಸ್ತ್ರಜ್ಞರಾದರೂ
ಸಮ್ಯಜ್ಞಾನಿಯಾದ ಒಬ್ಬ ಶರಣಂಗೆ ಸರಿಯಲ್ಲ.
ಇದು ಕಾರಣ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ
ಶರಣನೇ ಶಿವನೆನಬೇಕು.