ತನುವೆಂಬ ಭೂಮಿಯ ಮೇಲೆ,
ಶೃಂಗಾರದ ಇಂದ್ರಕೂಟಗಿರಿಯೆಂಬ ಕೈಲಾಸದಲ್ಲಿ
ಉತ್ತರ ದಕ್ಷಿಣ ಪಶ್ಚಿಮದಳದ
ಆತ್ಮ ಶಕ್ತಿ ಬಿಂದು ನಾದಗಳ ಮಧ್ಯದಲ್ಲಿ
ಶೂನ್ಯಸಿಂಹಾಸನವೆಂಬ ಸುಜ್ಞಾನಪೀಠದ ಮೇಲೆ
ನೀವು ಮೂರ್ತಿಗೊಂಡಿಹಿರಾಗಿ ಕಂಡು ಹರುಷಿತನಾದೆನು.
ಸೂರ್ಯಮಂಡಲದ ದ್ವಾತ್ರಿಂಶದಳದ ರುದ್ರರು ರುದ್ರಶಕ್ತಿಯರು
ನಿಮ್ಮನೋಲೈಸುತ್ತಿಹರು.
ಚಂದ್ರಮಂಡಲದ ಷೋಡಶದಳದ ರುದ್ರರು ರುದ್ರಶಕ್ತಿಯರು
ನಿಮ್ಮನೋಲೈಸುತ್ತಿಹರು.
ಅಗ್ನಿಮಂಡಲದ ಅಷ್ಟದಳದ ರುದ್ರರು ರುದ್ರಶಕ್ತಿಯರು
ನಿಮ್ಮನೋಲೈಸುತ್ತಿಹರು.
ಈ ಪರಿಯಿಂದ ದೇವರದೇವನ
ಓಲಗವನೇನೆಂದು ಹೇಳುವೆನು.
ಮತ್ತೆ ಭೇರಿ ಮೃದಂಗ ನಾಗಸರ ಕೊಳಲು ವೀಣೆ ಕಹಳೆ ಘಂಟೆ
ಶಂಖನಾದ ನಾನಾ ಬಹುವಿಧದ ಕೇಳಿಕೆಯ ಅವಸರದಲ್ಲಿ
ರಾಜಿಸುವ ರಾಜಯೋಗವ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನಿಮ್ಮ ಶರಣರಾದ ರಾಜಯೋಗಿಗಳೇ ಬಲ್ಲರು.