Index   ವಚನ - 264    Search  
 
ಬ್ರಹ್ಮಸ್ಥಾನದ ಬಳಿಯ ಸಹಸ್ರದಳಕಮಲ ಮಧ್ಯದಲ್ಲಿ ಸೂಕ್ಷ್ಮರಂಧ್ರವೆಂಬ ಒಂದು ಕೈಲಾಸ ದ್ವಾರವುಂಟು. ಆ ದ್ವಾರಕವಾಟವ ತೆಗೆದು ನೋಡಲು ಕೋಟಿ ಚಂದ್ರಪ್ರಕಾಶದ ದಿವ್ಯಪೀಠದ ಮೇಲೆ ಮೂರ್ತಿಗೊಂಡಿದ್ದ ಶಿವನ ಕಂಡು ಆ ನೋಡಿದ ನೋಟವಲ್ಲಿಯೆ ಸಿಕ್ಕಿ ಭಾವವಚ್ಚೊತ್ತಿ, ಸರ್ವಕರಣಂಗಳು ನಿವೃತ್ತಿಯಾಗಿ ಮನ ಉನ್ಮನಿಯಲ್ಲಿ ನಿಂದು ಸಮರಸ ಸಮಾಧಿಯಲ್ಲಿ ಇದ್ದನಯ್ಯಾ ನಿಮ್ಮ ಶರಣ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.