ರೂಪು ಲಿಂಗವೋ ನಿರೂಪು ಲಿಂಗವೋ ಎಂಬುದ
ವಿವರಿಸಿ ತಿಳಿದು ನೋಡೆ,
ರೂಪು ಲಿಂಗದಲ್ಲಿ ತ್ರಿಭುವನಾಧಾರವಾದ
ಶಿವ ಕಲಾ ರೂಪ ಚೈತನ್ಯ.
ನಿರೂಪಲಿಂಗವ ಭಾವಿಸಿ, ಧ್ಯಾನಪೂಜೆಯ ಮಾಡಿ;
ಕೋಟಿ ಸೂರ್ಯ ಪ್ರಕಾಶ ಚಿದ್ರೂಪ ಶಿವಲಿಂಗವ
ನೆನಹಿನ ಕೊನೆಯ ಮೇಲಿರಿಸಿ ನೆನೆದು ನಿತ್ಯ ತೃಪ್ತನಾದ
ಪರಾನಂದರೂಪ ಶಿವಯೋಗಿಯ ಯೋಗನಿದ್ರಾಮುದ್ರೆಯಲ್ಲಿ
ತಾನಿದಿರೆಂಬುದ ಮರೆದು ಭಿನ್ನವಿಲ್ಲದೆ ಶಿವಸುಖದೊಳಗಿಹನು
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣನು.