ವಚನ - 1460     
 
ಯೋಗದಾಗೆಂಬುದ ಮುನ್ನವೆ ಹೊದ್ದದ ಯೋಗಿಯೆ ಶಿವಯೋಗಿ. ಮೂಗ ಕಂಡ ಕನಸಿನ ಸ್ನೇಹದಂತೆ, ಮುಗ್ಧೆಯ ಮನ ಹರುಷದ ರತಿಯಂತೆ, ಸಂಧಾನದಂತೆ; ನಡು ಬಟ್ಟೆಯ ಮೂರು ನಡೆಗಳಲ್ಲಿ ಬರಿಗೆಯ್ದಡೆ ನಡೆಯೊಂದೆ ಸಸಿನ ಕಂಡಾ. ಒಂದ ಮೂರು ಮಾಡಿದಡೆಯೂ ಒಂದೆ ಕಂಡಾ. ಮೂರಾರಾದಡೆಯೂ ಒಂದೆ ಕಂಡಾ. ಆರು ಮುವತ್ತಾರಾದಡೆಯೂ ಒಂದೆ ಕಂಡಾ. ನಿನ್ನ ಅವಯವಂಗಳೆಲ್ಲ ಒಂದೆ ಕಂಡಾ. ನಿನ್ನ ಅರಿವು ಹಲವಾದಡೆ ಅರಿವು ನಿನಗೊಂದೆ ಕಂಡಾ. ಕತ್ತಲೆಯ ಮನೆ, ಮಾಯೆಯೆ ಕಾಡುವ ನಿದ್ರೆ. ಜಾಗರವಾಗಿ ಕಂಗೆಡಿಸಲು, ಕಂಗಳ ಹರವರಿಯಲು, ಮನವ ಮಣ್ಣಿಸು ಕಂಡಾ. ಗುಹೇಶ್ವರ ತಾನಾದ ಮುಗ್ಧತನಕ್ಕೆ ಕಡೆಮೊದಲುಂಟೆ?