Index   ವಚನ - 326    Search  
 
ಕಾಶಿಯಲ್ಲಿ ಗೋವಧೆಯ ಮಾಡಿ ಗುರುಕರುಣವ ಪಡೆದು ಪರವನರಿಯಬಲ್ಲಾತನೇ ಯೋಗಿ. ತ್ರಿವೇಣಿಸಂಗಮದಲ್ಲಿ ಮಂಡೋದರಿಯ ಕೊಂದು, ಮನನ ತ್ರಾಣಮಂತ್ರವನನುಸಂಧಾನಿಸಬಲ್ಲಾತನೇ ಯೋಗಿ. ಶ್ರೀಶೈಲದಲ್ಲಿ ಶಿವಸ್ತುತಿಯ ಕೇಳಿ, ಹಯವ ಹತಮಾಡಿ, ಮನವಳಿದಿರಬಲ್ಲಾತನೇ ಯೋಗಿ. ಪ್ರಯಾಗದಲ್ಲಿ ಉರಗನ ಕೊಂದು,ಫಣಾಮಣಿಯ ಸೆಳೆದುಕೊಂಡು, ಆ ಮಣಿಯ ಬೆಳಗಿನೊಳಗೆ ಸುಳಿದಾಡಬಲ್ಲಾತನೇ ಯೋಗಿ. ಕೇದಾರದಲ್ಲಿ ಮತ್ಸ್ಯವ ಕೊಂದು, ಮರಣವ ಗೆಲಿದು, ಪರಮ ಪದದಲ್ಲಿರಬಲ್ಲಾತನೇ ಯೋಗಿ. ಇಂತೀ ಪುಣ್ಯಕ್ಷೇತ್ರಂಗಳಲ್ಲಿ ಮಾಡಬಾರದುದ ಮಾಡಿ, ನೋಡಬಾರದುದ ನೋಡಿ, ಕೇಳಬಾರದುದ ಕೇಳಿ, ಶಿವನೊಲಿಸಿ ಶಿವನೊಳಗಾದರು ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ ನಿಮ್ಮ ಶರಣರು.