Index   ವಚನ - 345    Search  
 
ಭಾವಿಸಬಾರದ ಪ್ರಸಾದವ ರೂಹಿಸಬಾರದು. ರೂಹಿಸಬಾರದ ಪ್ರಸಾದವ ಸಾಧಿಸಬಾರದು. ಸಾಧಿಸಬಾರದ ಪ್ರಸಾದವ ಸಾಧಿಸಿ ಕಂಡೆಹೆನೆಂದು ನರ ಸುರ ಮನು ಮುನಿಗಳು, ಜಪ ತಪ ಹೋಮ ನಿತ್ಯನೇಮಂಗಳಿಂದರಸಿ ತೊಳಲಿ ಬಳಲುತ್ತಿದ್ದರಲ್ಲ! ಕಾಯವಂತರೆಲ್ಲರೂ ಕಳವಳಿಸುತ್ತಿದ್ದರು. ಆ ಮಹಾಪ್ರಸಾದವು ಮುನ್ನಾದಿಯ- ಶರಣಂಗಲ್ಲದೆ ಸಾಧ್ಯವಾಗದು. ಇದು ಕಾರಣ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ಮಹಾಪ್ರಸಾದವು, ಮಹಾಪ್ರಸಾದಿಗೆ ಸಾಧ್ಯ, ಉಳಿದವರಿಗಸಾಧ್ಯವು.