Index   ವಚನ - 346    Search  
 
ಆದಿಯ ಪ್ರಸಾದವ ಸಾಧಿಸಬಾರದು, ಬೇಧಿಸಬಾರದು. ನಿಮ್ಮ ಪ್ರಸಾದಿಗಲ್ಲದೆ ನೆಲೆಗೊಳಗಾಗದು. ಚರಾಚರದಲ್ಲಿ ಅನುಶ್ರುತ ಸುಖ ಪ್ರಸಾದವ ಭಕ್ತಿಪದಾರ್ಥವೆಂದು ರೂಹಿಸಿದ ಪರಿಯ ನೋಡಾ. ಅರ್ಚನಮುಖದಲ್ಲಿ ಪದಾರ್ಥವೆಂದು, ಅರ್ಪಣಮುಖದಲ್ಲಿ ಪ್ರಸಾದವೆಂದು ಕಲ್ಪಿಸಿದ ಪರಿಯ ನೋಡಾ. ಆದಿಯಲ್ಲಿ ಪ್ರಸಾದ, ಅಂತ್ಯದಲ್ಲಿ ಪ್ರಸಾದ, ಮಧ್ಯದಲ್ಲಿ ಒಂದು ಕ್ಷಣ ಪದಾರ್ಥವೆಂದು ಮಾಡಿದ ಪರಿಯ ನೋಡಾ. ಕಡೆ ಮೊದಲಿಲ್ಲದ ಪ್ರಸಾದವು ಭಕ್ತಿಗೆ ಸಾಧ್ಯವಾದ ಪರಿಯ ನೋಡಾ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು ಭಕ್ತಿಪ್ರಿಯನಾದ ಕಾರಣ, ಭಕ್ತಿಪ್ರಸಾದವ ಪಡೆದೆನಾಗಿ ಎನಗೆ ಪ್ರಸಾದ ಸಾಧ್ಯವಾಯಿತ್ತು.