ಅನುವನರಿದು ಅನುಭಾವಿಯಾದ ಕಾರಣ
ಸಮ್ಯಗ್ಜ್ಞಾನದಿಂದ ತನ್ನನರಿದು, ತನ್ನನೆ ಶಿವಭಾವವಾಗಿ ಕಂಡು
ಆ ಶಿವಭಾವದಲ್ಲಿ ತನ್ನಹೃದಯವ
ಸಮ್ಮೇಳವ ಮಾಡಿದ ಶರಣನು.
ತಾನೆ ಶಿವನ ಪರಮೈಶ್ವರ್ಯಕ್ಕೆ ಭಾಜನವಾಗಿ
ಸರ್ವಲೋಕವನು ಶಿವನೊಳಗಡಗಿಸಿದನಾಗಿ,
ಆ ಶಿವನ ತನ್ನೊಳಗಡಗಿಸಿ,
ಆ ಶಿವನಲ್ಲಿ ಮನವ ನಿಲಿಸಿ ನೆನೆವುತ್ತಿರಲು
ಆ ನೆನೆವ ಮನಸಿನ ಲಯಕ್ಕೆ ಭಾಜನವಾದಾತ
ಶಿವನೆಂದರಿದನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನು.